ಡಾಸ್ಯೂರ್
ಆಸ್ಟ್ರೇಲಿಯ ಹಾಗೂ ಟಾಸ್ಮೇನಿಯಗಳಲ್ಲಿ ವಾಸಿಸುವ ಒಂದು ಬಗೆಯ ಸಸ್ತನಿ. ಇದು ಮೆಟತೀರಿಯ ಉಪವರ್ಗದ ಮಾಸ್ರ್ಯುಪಿಯೇಲಿಯ ಗಣದ ಡಾಸಿಯೂರಿಡೀ ಕುಟುಂಬಕ್ಕೆ ಸೇರಿದೆ. ಆಸ್ಟ್ರೇಲಿಯದಲ್ಲಿ ಇದಕ್ಕೆ ಸ್ಥಳೀಯ ಬೆಕ್ಕು ಎಂಬ ಹೆಸರಿದೆ. ಇದರ ದೇಹದ ಉದ್ದ 40-45 ಸೆಂ.ಮೀ. ಬಾಲದ ಉದ್ದ 20-30 ಸೆಂ.ಮೀ. ದೇಹದ ಬಣ್ಣ ಗಾಢ ಕಂದು. ಜೊತೆಗೆ ಬಿಳಿಚುಕ್ಕೆಗಳಿವೆ. ಆದ್ದರಿಂದ ಡಾಸ್ಯೂರನ್ನು ಚುಕ್ಕೆ ಬೆಕ್ಕು ಎಂದು ಕರೆಯುವುದೂ ಉಂಟು. ಇದು ಮಾಂಸಾಹಾರಿ ಮತ್ತು ನಿಶಾಚರಿ. ಹಗಲಿನಲ್ಲಿ ಹೊರಗಿನ ಶಬ್ದ ಕೇಳದಂತೆ ತನ್ನ ಕಿವಿಗಳನ್ನು ಮಡಚಿಕೊಂಡು ಮರದ ಪೊಟರೆ ಅಥವಾ ಕಲ್ಲುಗಳ ಮಧ್ಯೆ ನಿರ್ಮಿಸಿಕೊಂಡ ಬಿಲಗಳಲ್ಲಿ ಮಲಗಿರುತ್ತದೆ. ಕೀಟಗಳು, ಹಲ್ಲಿಗಳು, ಮೀನು, ಸಣ್ಣಸಣ್ಣ ಪಕ್ಷಿಗಳು ಹಾಗೂ ಸ್ತನಿಗಳು ಇದರ ಆಹಾರ. ಮರವನ್ನು ಸುಲಭವಾಗಿ ಹತ್ತಬಲ್ಲುದು. ತಾಯಿ ಮರಿಗಳನ್ನು ತನ್ನ ಹೊಟ್ಟೆಯ ತಳಭಾಗದಲ್ಲಿರುವ ಚೀಲದಲ್ಲಿ ಅಡಗಿಸಿಕೊಂಡು, ಮೊಲೆಯುಣಿಸಿ ಸಾಕುತ್ತದೆ. ಡಾಸ್ಯೂರ್ ಮಾನವ ನೆಲೆಗೆ ಬಹಳ ಸುಲಭವಾಗಿ ಹೊಂದಿಕೊಳ್ಳುವುದರಿಂದ ಇದನ್ನು ಪಳಗಿಸಿ ಸಾಕುಪ್ರಾಣಿಯಾಗಿ ಉಪಯೋಗಿಸಬಹುದು. ಪೈರನ್ನು ನಾಶಮಾಡುವ ಇಲಿ, ಹೆಗ್ಗಣ, ಮೊಲ ಮುಂತಾದವನ್ನು ನಾಶಮಾಡಲು ಇದು ಬಹಳ ಸಹಕಾರಿಯಾಗಿದೆ. ಆದರೆ ಕೆಲವು ಸಾರಿ ಇದು ಕುರಿ, ಕೋಳಿಗಳನ್ನು ಕೊಲ್ಲುವುದುಂಟು.

	ಡಾಸ್ಯೂರಿನಲ್ಲಿ ಡಾಸ್ಯೂರಸ್, ಡಾಸ್ಯೂರಿನಸ್, ಸೇಟನೆಲಸ್ ಮತ್ತು ಡಾಸ್ಯೂರಾಪ್ಸ್ ಎಂಬ ನಾಲ್ಕು ಮುಖ್ಯ ಜಾತಿಗಳುಂಟು.
(ಕೆ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ